Telegram Join My Telegram   WhatsApp Join My WhatsApp

ಧಾರವಾಡದಲ್ಲಿ ಉದ್ಯೋಗ ಸಿಡಿಲು : ಲಕ್ಷಾಂತರ ಖಾಲಿ ಹುದ್ದೆ ಭರ್ತಿಗೆ ಸಾವಿರಾರು ಯುವಕರ ಹೋರಾಟ, ಸಿಎಂ ಸಿದ್ದರಾಮಯ್ಯ ಭರವಸೆ

ಧಾರವಾಡ : ಉದ್ಯೋಗದ ಆಸೆ ಆಕಾಂಕ್ಷೆಯನ್ನು ಹೊತ್ತು ಪ್ರತಿವರ್ಷ ಧಾರವಾಡಕ್ಕೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಏನಾದರೂ ಸಾಧಿಸಬೇಕು ಎಂಬ ಛಲದಿಂದ ಆಸೆನಾ ಹೊತ್ತು ದೂರದ ಊರುಗಳಿಂದ ಈ ವಿದ್ಯಾ ಕಾಶಿಯನ್ನ ಅರಸಿ ಅವರು ಬರುತ್ತಾರೆ. ಬಡತನ ಮನೆಯಲ್ಲಿ ಆರ್ಥಿಕ ವ್ಯವಸ್ಥೆ ಸರಿಯಿರುವುದಿಲ್ಲ ಹೀಗಿದ್ದರೂ ಸಹ ಛಲ ಬಿಡದೆ ನಿರಂತರವಾಗಿ ಅಭ್ಯಾಸವನ್ನ ನಡೆಸ್ತಾ ಇರ್ತಾರೆ. ಸಮಯವನ್ನು ವ್ಯರ್ಥ ಮಾಡದೇ ದಿನದ 24 ಗಂಟೆಯಲ್ಲಿ ಬಹುತೇಕ ಗಂಟೆಯನ್ನ ಅವರು ಗ್ರಂಥಾಲಯದಲ್ಲೇ ಕಳೆಯುತ್ತಾರೆ. ವರ್ಷಾನುಘಟ್ಟದಿಂದ ಉದ್ಯೋಗವನ್ನು ಹರಸಿ ಬಂದಂತಹ ವಿದ್ಯಾರ್ಥಿಗಳ ತಾಳ್ಮೆ ಕಟ್ಟೆ ಈಗ ಹೊಡೆದಿದೆ ಉದ್ಯೋಗಕ್ಕಾಗಿ ಕಾಯುತ್ತಿದ್ದಂತಹ ವಿದ್ಯಾರ್ಥಿಗಳು ಇನ್ಯಾವಾಗ ನೋಟಿಫಿಕೇಶನ್ ಬಿಡುತ್ತಾರೋ ಇಲ್ಲವೋ ಎಂಬ ಆತಂಕದಿಂದ ಧಾರವಾಡದಲ್ಲಿ ವಿದ್ಯಾರ್ಥಿಗಳು ಹೋರಾಟ ಮಾಡಲು ಮುಂದಾಗಿದ್ದಾರೆ.

ಧಾರವಾಡ ನಗರ ಸೋಮವಾರ ಅಕ್ಷರಶಃ ಕದಡಿಬಿದ್ದಿತ್ತು. ಸಾಮಾನ್ಯವಾಗಿ ಶಾಂತವಾಗಿರುವ ಈ ವಿದ್ಯಾನಗರದಲ್ಲಿ ಈ ಬಾರಿ ಕೇಳಿಬಂದದ್ದು ಯುವಕರ ಆಕ್ರೋಶದ ಘೋಷಣೆಗಳು. ವರ್ಷಗಳಿಂದ ಸರ್ಕಾರಿ ಉದ್ಯೋಗದ ಕನಸು ಹೊತ್ತು ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ಸಾವಿರಾರು ಯುವಕರು ಬೀದಿಗೆ ಇಳಿದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಶಿಕ್ಷಣ, ಪೊಲೀಸ್, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಸುಮಾರು 2.7 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕೆಂಬುದು ಅವರ ಪ್ರಮುಖ ಆಗ್ರಹವಾಗಿತ್ತು.

ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ನಡೆದ ಈ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. “ಉದ್ಯೋಗ ನಮ್ಮ ಹಕ್ಕು”, “ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ” ಎಂಬ ಘೋಷಣೆಗಳು ನಗರದೆಲ್ಲೆಡೆ ಮೊಳಗುತ್ತಿದ್ದವು. ಯುವಕರ ಮುಖಗಳಲ್ಲಿ ಕಂಡದ್ದು ಕೋಪ ಮಾತ್ರವಲ್ಲ; ಅದು ನಿರಾಶೆ, ಆತಂಕ ಮತ್ತು ಭವಿಷ್ಯದ ಅನಿಶ್ಚಿತತೆಯ ಸಂಕಲನವಾಗಿತ್ತು. ಬಿಜೆಪಿಯ ಕಾರ್ಯಕರ್ತ ನೇತೃತ್ವದಲ್ಲಿ ಈ ಮೆರವಣಿಗೆ ನಡೆಯುತ್ತಿದ್ದು ಉದ್ಯೋಗಕ್ಕಾಗಿ ಸಾವಿರಾರು ಜನ ಧಾರವಾಡದಲ್ಲಿ ಅಕ್ಷರ ಸಹ ಹೋರಾಟಕ್ಕೆ ನಿಂತುಬಿಟ್ಟಿದ್ದಾರೆ

“ಕುಟುಂಬ ಬಿಟ್ಟು ಬಂದರು ಪರೀಕ್ಷೆ ಇಲ್ಲ “

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಸಂಕಷ್ಟಗಳನ್ನು ಹಂಚಿಕೊಂಡರು. ಒಬ್ಬ ಯುವಕ, “ನಾನು ಮೂರು ವರ್ಷಗಳಿಂದ ಕುಟುಂಬದಿಂದ ದೂರವಿದ್ದು ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದೇನೆ. ಆದರೆ ಪರೀಕ್ಷೆಗಳೇ ನಡೆದಿಲ್ಲ. ನಮ್ಮ ಪರಿಶ್ರಮಕ್ಕೆ ಬೆಲೆ ಇಲ್ಲವೇ?” ಎಂದು ಪ್ರಶ್ನಿಸಿದರು. ಮತ್ತೊಬ್ಬರು, “ಸರ್ಕಾರಿ ಉದ್ಯೋಗವೇ ನಮ್ಮ ಬದುಕಿನ ನೆಲೆ. ಖಾಸಗಿ ವಲಯದಲ್ಲಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.

ಯಾವ ಕೆಲಸವನ್ನು ಸಹ ಮಾಡದೇ ಕೇವಲ ಓದನ್ನ ಕಾರ್ಯವನ್ನಾಗಿ ಇರಿಸಿಕೊಂಡು ಪ್ರತಿದಿನ ನಿರಂತರ ಅಭ್ಯಾಸವನ್ನು ಮಾಡುತ್ತ ತನ್ನ ವಯಸ್ಸಿನ ಬಗ್ಗೆಯೂ ಲೆಕ್ಕಿಸದೆ ತನ್ನ ತಂದೆ ತಾಯಿ ಕುಟುಂಬ ಇವೆಲ್ಲವನ್ನೂ ಕೂಡ ಬಿಟ್ಟು ನಿರಂತರ ಅಭ್ಯಾಸ ಮಾಡುತ್ತಿದ್ದರು ಯಾವುದೇ ಉದ್ಯೋಗಗಳನ್ನು ಸರ್ಕಾರ ಅಧಿಕೃತವಾಗಿ ನೇಮಕಾತಿ ಮಾಡಿಕೊಳ್ಳಲು ಅಧಿ ಸೂಚನೆಯನ್ನು ಹೊರಡಿಸಿಲ್ಲ.

ಈ ಹೋರಾಟ ಕೇವಲ ರಾಜಕೀಯ ಪ್ರೇರಿತವಲ್ಲ; ಅದು ಸಾವಿರಾರು ಕುಟುಂಬಗಳ ಬದುಕಿಗೆ ಸಂಬಂಧಿಸಿದ ವಿಷಯ. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಅನೇಕ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗವೇ ಆರ್ಥಿಕ ಸ್ಥಿರತೆಯ ಏಕೈಕ ಭರವಸೆ. ಹೀಗಾಗಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿರುವುದು ಅವರ ಆತಂಕವನ್ನು ಮತ್ತಷ್ಟು ಗಾಢಗೊಳಿಸಿದೆ. ಗ್ರಾಮೀಣ ಪ್ರದೇಶದಿಂದ ಉದ್ಯೋಗವನ್ನು ಹರಸಿ ಬಂದಂತಹ ಸಾವಿರಾರು ವಿದ್ಯಾರ್ಥಿಗಳು ಧಾರವಾಡದಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉಳಿದು ಹೋಗಿದ್ದಾರೆ.

ಪೊಲೀಸ್ ತಡೆ – ಉದ್ವಿಗ್ನ ಕ್ಷಣಗಳು

ಪ್ರತಿಭಟನೆಯ ಆಯೋಜಕರಾದ ಕಂಠಕುಮಾರ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿತು. ಜಯನಗರ ವೃತ್ತದತ್ತ ಮೆರವಣಿಗೆ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ಶ್ರೀನಗರ ವೃತ್ತದ ಬಳಿ ಪೊಲೀಸರು ತಡೆದರು. ಕೆಲಕಾಲ ತುಸು ಗಲಾಟೆಯೂ ನಡೆಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಧಾರವಾಡ ಪೊಲೀಸರು ಹರಸಾಹಸ ಪಡಬೇಕಾಯಿತು.

ಇದರ ನಡುವೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ (AKSA) ಪ್ರತಿಭಟನೆಗೆ ಅನುಮತಿ ಕೋರಿ ಪೊಲೀಸರನ್ನು ಸಂಪರ್ಕಿಸಿತ್ತು. ಅನುಮತಿ ನಿರಾಕರಣೆಯ ಹಿನ್ನೆಲೆ ಸಂಘಟನೆ ಹೈಕೋರ್ಟ್ ಮೊರೆ ಹೋಗಿತ್ತು. ನ್ಯಾಯಾಲಯ ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿದರೂ, ಈ ನಡುವೆ ಬಿಜೆಪಿ ಹೋರಾಟಕ್ಕೆ ಪೊಲೀಸರು ಗ್ರೀನ್ ಸಿಗ್ನಲ್ ನೀಡಿರುವುದರಿಂದ ಯುವಕರು ಅನುಮತಿ ಇಲ್ಲದಿದ್ದರೂ ಬೀದಿಗೆ ಇಳಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಎಂ ಪ್ರತಿಕ್ರಿಯೆ

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದರು. “ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಅನುಭವಿಸುತ್ತಿರುವ ಆತಂಕ, ನಿರಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಪ್ರತಿ ಅರ್ಜಿಯ ಹಿಂದೆ ಒಂದು ಕನಸು ಮತ್ತು ಕುಟುಂಬದ ನಿರೀಕ್ಷೆ ಇರುತ್ತದೆ,” ಎಂದು ಅವರು ಹೇಳಿದ್ದಾರೆ.

ಸಿಎಂ ಅವರ ಪ್ರಕಾರ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಾಗಿದ್ದವು. ಇದು ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಸಕಾಲದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸದ ಪರಿಣಾಮ ಎಂದು ಅವರು ಆರೋಪಿಸಿದರು. ವಿರೋಧ ಪಕ್ಷ ಯುವಕರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬ ಟೀಕೆಯನ್ನೂ ಮಾಡಿದ್ದಾರೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ – ಆರೋಪ ಪ್ರತ್ಯಾರೋಪ

ಉಪ ಮುಖ್ಯಮಂತ್ರಿ D. K. ಶಿವಕುಮಾರ್  ಕೂಡ ಪ್ರತಿಕ್ರಿಯೆ ನೀಡಿ, ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಎಷ್ಟು ನೇಮಕಾತಿ ನಡೆಸಿತು ಎಂದು ಪ್ರಶ್ನಿಸಿದರು. ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ ಎಂಬುದನ್ನೂ ಅವರು ಉಲ್ಲೇಖಿಸಿದರು.

ಆದರೆ ಪ್ರತಿಭಟನಾಕಾರರು 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕವೂ ದೊಡ್ಡ ಮಟ್ಟದ ನೇಮಕಾತಿಗಳು ನಡೆದಿಲ್ಲ ಎಂದು ವಾದಿಸುತ್ತಿದ್ದಾರೆ. “ಯಾರು ಆಡಳಿತದಲ್ಲಿರಲಿ, ನಮಗೆ ಬೇಕಾದ್ದು ಉದ್ಯೋಗ ಮಾತ್ರ,” ಎಂದು ಒಬ್ಬ ಅಭ್ಯರ್ಥಿ ಸ್ಪಷ್ಟವಾಗಿ ಹೇಳಿದರು.

ನೇಮಕಾತಿ ಪ್ರಕ್ರಿಯೆ – ಅಡೆತಡೆಗಳು

ಸರ್ಕಾರದ ವಿವರಣೆ ಪ್ರಕಾರ, 2019ರಿಂದ 2023ರವರೆಗೆ ನಡೆದ ನೇಮಕಾತಿ ಅಕ್ರಮಗಳು ಮತ್ತು ಭ್ರಷ್ಟಾಚಾರದಿಂದ ಯುವಕರಲ್ಲಿ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿತವಾಗಿದೆ. ಜೊತೆಗೆ ಒಳಮೀಸಲಾತಿಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳ ಕಾರಣದಿಂದ ಹಲವು ನೇಮಕಾತಿ ಪ್ರಕ್ರಿಯೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು.

ಆದಾಗ್ಯೂ, ಕಳೆದ ಎರಡೂವರೆ ವರ್ಷಗಳಲ್ಲಿ 40,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ನಡೆಸಲಾಗಿದೆ ಎಂದು ಸರ್ಕಾರ ಹೇಳಿದೆ. ನೇಮಕಾತಿ ವಿಳಂಬದಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಲಗೊಳಿಸಿರುವುದೂ ಪ್ರಮುಖ ಕ್ರಮವಾಗಿದೆ.

ಯುವಕರ ಭವಿಷ್ಯ – ಸರ್ಕಾರದ ಭರವಸೆ

ಉಳಿದ ಖಾಲಿ ಹುದ್ದೆಗಳನ್ನು ಪಾರದರ್ಶಕವಾಗಿ, ಕಾಲಮಿತಿಯೊಳಗೆ ಭರ್ತಿ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ನೇಮಕಾತಿ ಸಂಸ್ಥೆಗಳನ್ನು ಬಲಪಡಿಸುವ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಲಾಗಿದೆ. “ಇದು ಕೇವಲ ಹುದ್ದೆ ಭರ್ತಿ ಮಾಡುವ ವಿಷಯವಲ್ಲ; ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುವ ಪ್ರಶ್ನೆ,” ಎಂದು ಸಿಎಂ ಹೇಳಿದ್ದಾರೆ.

ದೊಡ್ಡ ಪ್ರಶ್ನೆ ಏನು?

ಧಾರವಾಡದಲ್ಲಿ ನಡೆದ ಈ ಪ್ರತಿಭಟನೆ ಕೇವಲ ಒಂದು ದಿನದ ಘಟನೆ ಅಲ್ಲ. ಇದು ರಾಜ್ಯದಾದ್ಯಂತ ಇರುವ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಮನಸ್ಥಿತಿಯ ಪ್ರತಿಬಿಂಬವಾಗಿದೆ. ಪರೀಕ್ಷೆಗಳು ಸಮಯಕ್ಕೆ ನಡೆಯಬೇಕು, ಫಲಿತಾಂಶಗಳು ಪಾರದರ್ಶಕವಾಗಿರಬೇಕು, ನೇಮಕಾತಿ ಪ್ರಕ್ರಿಯೆ ವಿಳಂಬವಾಗಬಾರದು – ಎಂಬುದು ಯುವಕರ ಸ್ಪಷ್ಟ ಬೇಡಿಕೆ.

ರಾಜಕೀಯ ಆರೋಪ-ಪ್ರತ್ಯಾರೋಪಗಳು ಮುಂದುವರಿಯಬಹುದು. ಆದರೆ ಈ ಹೋರಾಟದ ಕೇಂದ್ರಬಿಂದು ಯುವಕರ ಭವಿಷ್ಯ. ಸರ್ಕಾರ ನೀಡಿದ ಭರವಸೆಗಳು ಎಷ್ಟು ವೇಗವಾಗಿ ಜಾರಿಗೆ ಬರುತ್ತವೆ ಎಂಬುದೇ ಮುಂದಿನ ದಿನಗಳಲ್ಲಿ ನಿರ್ಧಾರಕಾರಿ ಆಗಲಿದೆ.

ಇದೀಗ ರಾಜ್ಯದ ಯುವಕರ ಕಣ್ಣು ಸರ್ಕಾರದ ಮುಂದಿನ ಹೆಜ್ಜೆಯ ಮೇಲೆ ನೆಟ್ಟಿದೆ. ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆಯೇ? ಅಥವಾ ಮತ್ತೊಮ್ಮೆ ರಾಜಕೀಯ ಚರ್ಚೆಗಳಲ್ಲೇ ಸೀಮಿತವಾಗುತ್ತದೆಯೇ? ಈ ಪ್ರಶ್ನೆಗಳ ಉತ್ತರವೇ ಸಾವಿರಾರು ಕನಸುಗಳ ಭವಿಷ್ಯವನ್ನು ನಿರ್ಧರಿಸಲಿದೆ.

ಹೋರಾಟದ ಹಿನ್ನೆಲೆ ಏನು 

ರಾಜ್ಯದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇರುವುದಾಗಿ ಆರೋಪ ಮಾಡಿ ಹೊರಟ

ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಯುವಕರಲ್ಲಿ ಆಕ್ರೋಶ ಹೆಚ್ಚಾಗಿದೆ.

ಈ ಹೋರಾಟ ಧಾರವಾಡದಿಂದ ಆರಂಭವಾಗಿ ರಾಜ್ಯದಾದ್ಯಂತ ವಿಸ್ತರಿಸುವ ಲಕ್ಷಣಗಳಿವೆ.

ಹೋರಾಟ ಸ್ವರೂಪ 

ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಟನೆಗಳು ಸೇರಿ ಹೋರಾಟಕ್ಕೆ ಬೆಂಬಲ ನೀಡಲು ಮುಂದಾಗಿವೆ

ಮೀಸಲಾತಿಗಳ ನೆಪ ವೊಡ್ಡಿ ಸರ್ಕಾರ ಹುದ್ದೆಗಳ ಭರ್ತಿ ವಿಳಂಬ ಮಾಡುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ

“ಉದ್ಯೋಗ ಕೊಡಿ” ಎಂಬ ಘೋಷಣೆಗಳೊಂದಿಗೆ ಧರಣಿಮಾಡುತ್ತಿದ್ದಾರೆ.

ವಿರೋಧ ಪಕ್ಷದ ಸಹಾಯದೊಂದಿಗೆ ವಿದ್ಯಾರ್ಥಿಗಳ ಹೋರಾಟ.

ನಮ್ಮ ಸಲಹೆಗಳು 

ಶಾಂತಿಯುತ ಹೋರಾಟ ಮಾಡಿ : ಪ್ರತಿಭಟನೆ ಯಾವಾಗಲೂ ಶಾಂತಿಯುತವಾಗಿದ್ದರೆ ಜನರ ಬೆಂಬಲ ಹೆಚ್ಚು ಸಿಗುತ್ತದೆ.ಯಾರಿಗೂ ಹಾನಿಯಾಗದಂತೆ ಸಾರ್ವಜನಿಕ ಅಸ್ತಿ ಪಾಸ್ತಿಗೆ ದಕ್ಕೆ ಮಾಡದಂತೆ ಹೋರಾಟ ನಡೆಸಿ.ಧಾರವಾಡ ನಲ್ಲಿ ನಡೆಯುತ್ತಿರುವ ಹೋರಾಟವು ಸಹ ಜನಮನ್ನಣೆ ಪಡೆಯುವ ಉದ್ದೇಶ ಕೂಡ ಹೊಂದಿರಲಿ.

ಸಂಘಟಿತ ಶಕ್ತಿ ಹೆಚ್ಚಿಸಿಕೊಳ್ಳಿ ಒಗ್ಗಟ್ಟು ಪ್ರದರ್ಶಸಿ 

ವಿದ್ಯಾರ್ಥಿ ಸಂಘಟನೆಗಳು, ಯುವಕರ ಸಂಘಗಳು ಒಟ್ಟಾಗಿ ಕೆಲಸ ಮಾಡಿದರೆ ಒತ್ತಡ ಹೆಚ್ಚಾಗುತ್ತದೆ. ಒಬ್ಬೊಬ್ಬರಾಗಿ ಹೋರಾಡುವುದಕ್ಕಿಂತ ಒಟ್ಟಾಗಿ ಹೋರಾಟ ಮಾಡುವುದು ಹೆಚ್ಚು ಯಶಸ್ಸು ನೀಡುತ್ತದೆ.

ಕಾನೂನು ಮಾರ್ಗ ಬಳಸಿಕೊಳ್ಳುವುದು ಉತ್ತಮ 

ಹೈಕೋರ್ಟ್ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ಪತ್ರಗಳ ಮೂಲಕ ಮನವಿ ಸಲ್ಲಿಸಿ.

RTI (ಮಾಹಿತಿ ಹಕ್ಕು) ಮೂಲಕ ಹುದ್ದೆಗಳ ಮಾಹಿತಿ ಪಡೆದುಕೊಳ್ಳಿ ಯಾವ ಇಲಾಖೆಯಲ್ಲಿ ಎಷ್ಟು ಖಾಲಿ ಹುದ್ದೆಗಳಿವೆ ಎಂದು ತಿಳಿದು ಕೊಳ್ಳಿ

 

Leave a Comment