ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಮರಿ ಕೋತಿಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಗೊಂಬೆಯೊಂದನ್ನ ತಬ್ಬಿಕೊಂಡು ಕುಳಿತಿರುವ ಆ ಮರಿ ಕೋತಿ, ನೋಡೋವರ ಹೃದಯ ಕಲುಕುತ್ತಿದೆ. ಆದರೆ ಈ ದೃಶ್ಯದ ಹಿಂದೆ ಇರುವ ನಿಜವಾದ ಕಥೆ ಇನ್ನೂ ಕರುಣಾಜನಕವಾಗಿದೆ.
ಇದು ಕೇವಲ ಪಂಚನ ಕಥೆ ಮಾತ್ರ ಅಲ್ಲ ಒಂಟಿತನದಿಂದಾಗಿ ಪ್ರೀತಿಯ ರುಚಿಯನ್ನು ಕಾಣದ ಏಕಾಂಗಿ ಜೀವನವು ಅದೆಷ್ಟು ನೋವಿನಿಂದ ಕೂಡಿರುತ್ತೆ ಎಂಬುದನ್ನ ಇದು ಸಾರಿ ಸಾರಿ ಹೇಳುತ್ತದೆ.
ಮನುಷ್ಯನಾಗಲಿ ಪ್ರಾಣಿಯಾಗಲಿ ತಾಯಿಯ ಪ್ರೀತಿ ಇಲ್ಲದಿದ್ದರೆ ಜೀವನವೇ ಖಾಲಿಯಾದಂತೆ ಅನಿಸಿಬಿಡುತ್ತದೆ. ಈ ಭೂಮಿ ಮೇಲೆ ಹುಟ್ಟುವಂತಹ ಪ್ರತಿಯೊಂದು ಜೀವಿಯು ತಾಯಿಯ ಬೆಚ್ಚಗಿನ ಅಪ್ಪುಗೆಯನ್ನು ಬಯಸುತ್ತದೆ. ಆ ಅಪ್ಪುಗೆಯಲ್ಲಿ ಇಡೀ ಜಗತ್ತಿನ ಭದ್ರತೆ ಅಡಗಿರುತ್ತದೆ.
ಮನುಷ್ಯನನ್ನ ಪ್ರಾಣಿಗಳಿಗಿಂತ ವಿಭಿನ್ನವಾಗಿಸೋದು ಭಾವನೆಗಳು ಅಂತ ಹೇಳ್ತಾರೆ. ಆದರೆ “ತಾಯಿ ಪ್ರೀತಿ” ಅಂದ್ರೆ ಅದು ಮನುಷ್ಯನಿಗಷ್ಟೇ ಸೀಮಿತ ಅಲ್ಲ. ಯಾವ ಪ್ರಾಣಿ ಆಗಿರಲಿ, ತನ್ನ ಮರಿಗೆ ತಾಯಿಯ ಮಮತೆ ಒಂದೇ ತರ. ಆದರೆ ಜಪಾನ್‌ನ ಒಂದು ಪ್ರಾಣಿ ಸಂಗ್ರಹಾಲಯದಲ್ಲಿ ನಡೆದ ಘಟನೆ, ಈ ಮಾತನ್ನೇ ಪ್ರಶ್ನಿಸುವಂತಿದೆ.
ಈ ಘಟನೆ ಜಪಾನ್‌ನ Ichikawa City Zoo ನಲ್ಲಿ ನಡೆದಿದೆ. ಇಲ್ಲಿ ಹಲವು ಪ್ರಾಣಿಗಳು ಸಮಾಧಾನಕರವಾಗಿ ಬದುಕುತ್ತಿವೆ. ಕೋತಿಗಳ ಗುಂಪೂ ಸಹ ಅನ್ಯೋನ್ಯತೆಯಿಂದ ದಿನ ಕಳೆಯುತ್ತಿದೆ. ತಾಯಿ ಕೋತಿಗಳು ತಮ್ಮ ಮರಿಗಳ ಜೊತೆ ಆಟವಾಡುತ್ತಾ, ಮುದ್ದಾಡುತ್ತಾ ಇರುವ ದೃಶ್ಯಗಳು ಇಲ್ಲಿ ಸಾಮಾನ್ಯ.
ಕಣ್ಣು ಬಿಟ್ಟಾಗ ತನ್ನ ತಾಯಿಯ ಎದೆಯ ಹಾಲಿನ ರುಚಿಯನ್ನು ಸವಿಯ ಬೇಕಾಗಿದ್ದಂತಹ ಆ ಪಂಚ್ ಎಂಬ ಮರಿ ಕೋತಿ ತನ್ನ ತಾಯಿಯ ಪ್ರೀತಿ ಇಲ್ಲದೆ ಕೆಂಗಣ್ಣಿಗೆ ಗುರಿಯಾಗಿ ತನ್ನ ತಾಯಿಯಿಂದ ತಲ್ಲಲ್ಪಟ್ಟಾಗ ಆ ಮರಿಕೋತಿಯ ಮನಸ್ಸಿನ ಮೇಲೆ ಅದೆಂಥ ಘಾಸಿ ಆಗಿರಬೇಕು. ಆ ಜೂನಲ್ಲಿ ಎಲ್ಲಾ ಮರಿ ಕೋತಿ ಹಾಗೂ ತನ್ನ ತಾಯಿಯ ಜೊತೆ ಇರುತ್ತಿದ್ದವು.
ಆದರೆ ಇದೇ ಗುಂಪಿನಲ್ಲಿ ಇರುವ ಒಂದು ಮರಿ ಮಾತ್ರ ಎಲ್ಲರಿಗಿಂತ ವಿಭಿನ್ನ. ಅದರ ಹೆಸರು “ಪಂಚ್”. ಕೇವಲ 7 ತಿಂಗಳ ಈ ಮರಿ ಕೋತಿ, ಇತರ ಮರಿಗಳಂತೆ ತಾಯಿಯ ಮಡಿಲಲ್ಲಿ ಆಟವಾಡುತ್ತಿಲ್ಲ. ಬದಲಿಗೆ ಅದು ಯಾವಾಗಲೂ ಒಂದು ಗೊಂಬೆಯನ್ನು ತಬ್ಬಿಕೊಂಡೇ ಕಾಣಿಸುತ್ತದೆ.
ಮೊದಲು ನೋಡಿದಾಗ, “ಮರಿ ಕೋತಿ ಗೊಂಬೆ ಹಿಡಿದು ಆಟವಾಡ್ತಿದೆಯಲ್ಲಾ!” ಅನ್ನಿಸಬಹುದು. ಆದರೆ ಇದರ ಹಿಂದೆ ಇರುವ ನಿಜವಾದ ಕಾರಣ ಕೇಳಿದ್ರೆ, ಮನಸ್ಸೇ ಭಾರವಾಗುತ್ತದೆ.
ತಾಯಿ ಪ್ರೀತಿಯಿಲ್ಲದ ಬದುಕು
ತಾಯಿ ಎಂದರೆ ಕೇವಲ ಹಾಲುಣಿಸುವ ಜೀವ ಮಾತ್ರ ಅಲ್ಲ ಅದು ಪ್ರಪಂಚದ ಶಕ್ತಿ. ಅಮ್ಮನ ಹುಟ್ಟಿಗೆ ಅಂಟಿಕೊಂಡೆ ಆ ಮಂಗಗಳು ಜಗತ್ತನ್ನ ನೋಡ್ತವೆ. ಆದರೆ ಪಂಚ್ ಮಾತ್ರ ಹುಟ್ಟಿದ ತಕ್ಷಣವೇ ಅನಾಥವಾಗಿ ನಿಂತುಬಿಡ್ತು. ಅಮ್ಮನ ಮಡಿಲಲ್ಲಿ ಬೆಳೆಯಬೇಕಾದ ವಯಸ್ಸಿನಲ್ಲಿ, ಅದು ಒಂಟಿಯಾಗಿಬಿಟ್ಟಿದೆ. ತಾಯಿ ದೂರವಾದ ಕ್ಷಣದಿಂದಲೇ ಅದರ ಬದುಕಿನಲ್ಲಿ ದೊಡ್ಡ ಶೂನ್ಯ ಉಂಟಾಗಿದೆ. ಆ ಪುಟ್ಟ ಕಣ್ಣುಗಳಲ್ಲಿ ಕಂಡಂತಹ ದಯನೀಯ ಸ್ಥಿತಿ ಎಂಥವರ ಕಣ್ಣಲ್ಲೂ ಕೂಡ ನೀರು ತರಿಸುತ್ತೆ.
ಪ್ರಾಣಿ ಲೋಕದಲ್ಲೂ ತಾಯಿ-ಮಗು ಬಂಧ ತುಂಬಾ ಗಾಢ. ಮರಿಗಳು ಭಯಪಟ್ಟಾಗ, ನೋವಾದಾಗ, ಹಸಿವಾದಾಗ ತಾಯಿಯತ್ತ ಓಡುತ್ತವೆ. ಆದರೆ ಪಂಚ್‌ಗೆ ಆ ಅವಕಾಶವೇ ಇಲ್ಲ. ಅಮ್ಮನ ತಿರಸ್ಕಾರ ಎಂಬುದು ಕೇವಲ ಒಂದು ಘಟನೆಯಲ್ಲ ಅದು ಒಂದು ಜೀವನ ಅಸ್ತಿತ್ವವನ್ನೇ ಪ್ರಶ್ನಿಸುವ ನೋವು. ಆಪಂಚ್ ಕೋತಿಗೆ ತನಗೆ ಏನು ತಪ್ಪು ಮಾಡಿದೆ ಎಂಬ ಅರಿವು ಸಹ ಇರಲಿಲ್ಲ ಅಮ್ಮನ ಪ್ರೀತಿಗಾಗಿ ಅದು ಹಂಬಲಿಸುತ್ತಿತ್ತು. ತನ್ನ ತಾಯಿಯಿಂದ ತಿಳಿಸ್ಕೃತವಾದಂತಹ ಆಪಂಚ್ ಮೃಗಾಲಯದ ಒಂದು ಮೂಲೆಯಲ್ಲಿ ಕುಳಿತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಇತರ ಕೋತಿಗಳ ಬಳಿ ಹೋದಾಗ ಅವು ಪಂಚ್ ನನ್ನು ಕಚ್ಚಿ ಗಾಯಗೊಳಿಸುತ್ತಿತ್ತು ಪಂಚ್ಗೇನೋ ಆಹಾರ ಸಿಕ್ತಾ ಇತ್ತು ಆದರೆ ಅದಕ್ಕೆ ಬೇಕಾದಂತಹ ಪ್ರೀತಿ ಸಿಕ್ತಾ ಇರಲಿಲ್ಲ. ತಾಯಿಯ ಪ್ರೀತಿ ಅಮ್ಮನ ಸ್ಪರ್ಶ ಅದಕ್ಕೆ ಮರೀಚಿಕೆಯಾಗಿತ್ತು.
ಜೂ ಸಿಬ್ಬಂದಿ, ಪಂಚ್ ಅನ್ನು ಇತರ ಕೋತಿಗಳ ಜೊತೆ ಬೆರೆಯಲು ಬಿಡಿದ್ದಾರೆ. ಆದರೆ ಅಲ್ಲಿ ಮತ್ತೊಂದು ದುಃಖಕರ ಸಂಗತಿ ನಡೆದಿದೆ. ಇತರ ಕೋತಿಗಳು ಪಂಚ್ ಅನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲಿಲ್ಲ. ಕೆಲವೊಮ್ಮೆ ದೂರ ತಳ್ಳಿದವು, ಕೆಲವೊಮ್ಮೆ ನಿರ್ಲಕ್ಷಿಸಿದವು.
ಒಂದೆಡೆ ತಾಯಿ ಪ್ರೀತಿ ಇಲ್ಲ. ಮತ್ತೊಂದೆಡೆ ಗುಂಪಿನ ನಿರಾಕರಣೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ 7 ತಿಂಗಳ ಮರಿ ಹೇಗೆ ಮನಸ್ಸು ನಿಭಾಯಿಸಲಿ?
ಗೊಂಬೆಯೇ ಜೀವಾಳ
Zoo ನ ಸಿಬ್ಬಂದಿಯವರು ಆ ಪಂಚ್ಗೆ ಒಂದು ಕಿತ್ತಳೆ ಬಣ್ಣದ ಕೊರಂಗೂಟನ್ ಗೊಂಬೆಯನ್ನ ನೀಡಿದರು. ಅದು ಕೇವಲ ಬಟ್ಟೆಯ ತುಣುಕು ಆಗಿರಲಿಲ್ಲ ಅದು ಪಂಚ್ ಗೆ ಸಾಕ್ಷಾತ್ ಅಮ್ಮನೆ ಆಗಿತ್ತು. ಆ ಬೊಂಬೆಯ ಉದ್ದವಾದ ಕೂದಲಿನಲ್ಲಿ ತನ್ನ ತಾಯಿಯ ಸ್ಪರ್ಶವನ್ನು ಹುಡುಕುತ್ತಾ ಇತ್ತು ಹಾಗೂ ಅದು ಎಲ್ಲಿ ಹೋದರು ಸಹ ಆ ಬೊಂಬೆಯನ್ನು ಹಿಡಿದು ಸಾಗುತ್ತಿತ್ತು. ಇತರ ಮಂಗಗಳು ತನ್ನ ತಾಯಿಯ ಮಡಿಲಲ್ಲಿ ಮಲಗಿದ್ರೆ ಈ ಪಂಚ್ ಮಾತ್ರ ಆ ಬೊಂಬೆಯ ಮಡಿಲಲ್ಲಿ ತನ್ನ ತಾಯಿ ಎಂದು ತಿಳಿದು ಮಲಗ್ತಾ ಇತ್ತು . ಬಹುಶಹ ಆಪನ್ ಅದನ್ನ ಕನಸಿನಲ್ಲಿ ತನ್ನ ತಾಯಿಎಂದು ತಿಳಿದಿತ್ತು ಅನಿಸುತ್ತೆ. ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಒಂಟಿಯಾದಾಗ ಒಂದು ಸಣ್ಣ ನೆನಪನ್ನು ಆಸರೆಯಾಗಿ ಮಾಡಿಕೊಂಡು ಬದುಕುತ್ತಾನೆಯೋ ಅದೇ ರೀತಿಯಾಗಿ ಪಂಚ್ ಕೂಡ ಆ ಬೊಂಬೆಯನ್ನ ಮಾಡಿಕೊಂಡಿದ್ದ ಆ ದೃಶ್ಯ ನೋಡಲು ಮುದ್ದಾಗಿದ್ದರೂ ಸಹ ಕೋತಿಯ ನೋವು ಮಾತ್ರ ಹೇಳುತ್ತೀರದು. ನಾವು ನೋಡುವುದು ಕೇವಲ ಒಂದು ಮಂಗವನಲ್ಲ ತಾಯಿಯ ಆಸರೆ ಇಲ್ಲದೆ ಕಾಡುವಂತಹ ಪ್ರತಿಯೊಬ್ಬ ಮಗುವಿನ ಅನಾಥ ಪ್ರಜ್ಞೆ. ಮಗು ತಪ್ಪು ಮಾಡಿದಾಗ ಹೊಡೆಯಬಹುದು ಅಥವಾ ಬಯ್ಯಬಹುದು ತದನಂತರ ತಾಯಿ ಆ ಮಗುವನ್ನ ತನ್ನ ಎದೆಗೆ ಅಪ್ಪಿ , ಸಂತೈಸುವ ಕ್ಷಣ ಯಾವ ಸ್ವರ್ಗಕ್ಕಿಂತಲೂ ಕೂಡ ಏನು ಕಡಿಮೆ ಇಲ್ಲ. ಆದರೆ ಪಂಚ್ ಗೆ ಸ್ವರ್ಗದ ಅನುಭವ ಪಡೆಯಲು ಸಹ ಆಗಲಿಲ್ಲ. ಪರಿಸ್ಥಿತಿ ನೋಡಿ ಇಡಿ ಜಗತ್ತೇ ಕಣ್ಣೀರು ಹಾಕುತ್ತಿದೆ.
ಆ ಗೊಂಬೆಯನ್ನು ಅದು ತಾಯಿಯಂತೆ ತಬ್ಬಿಕೊಂಡು ಕೂತಿರುವ ದೃಶ್ಯ ಈಗ ಎಲ್ಲರ ಕಣ್ಣೀರಿಗೂ ಕಾರಣವಾಗಿದೆ. ಗೊಂಬೆಯನ್ನೇ ತನ್ನ ಅಮ್ಮ ಎಂದು ಭಾವಿಸಿ, ಅದಕ್ಕೆ ಅಂಟಿಕೊಂಡಿರುವ ಪಂಚ್‌ನ ವರ್ತನೆ, ಮನುಷ್ಯರನ್ನೇ ಮೌನಗೊಳಿಸಿದೆ.
ಇತರ ಕೋತಿಗಳು ದೂರ ತಳ್ಳಿದಾಗ, ಪಂಚ್ ಆ ಗೊಂಬೆಯನ್ನೇ ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ಹೆದರಿದಾಗ ಅದನ್ನೇ ಮಡಿಲಲ್ಲಿ ಇಟ್ಟುಕೊಳ್ಳುತ್ತದೆ. ಮಲಗುವಾಗ ಅದನ್ನೇ ತಬ್ಬಿಕೊಂಡೇ ಮಲಗುತ್ತದೆ.
ನಿರ್ಜೀವ ಗೊಂಬೆಯೇ ಈಗ ಪಂಚ್‌ಗೆ ತಾಯಿ, ತಂದೆ, ಸ್ನೇಹಿತ, ಬಂಧು-ಬಳಗ ಎಲ್ಲವೂ ಆಗಿಬಿಟ್ಟಿದೆ.
ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪ್ರತಿಕ್ರಿಯೆ
ಈ ಮನಕಲಕುವ ದೃಶ್ಯ ಜೂಗೆ ಭೇಟಿ ನೀಡಿದ ಪ್ರವಾಸಿಗರೊಬ್ಬರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಆ ನಂತರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡಿದ ಅನೇಕರು “ಪ್ರಾಣಿಗಳಲ್ಲೂ ಇಷ್ಟು ಭಾವನೆಗಳಿವೆಯಾ?” ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, “ಪಂಚ್‌ಗೆ ಮಾನವೀಯ ಕಾಳಜಿ ಹೆಚ್ಚಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿನ ಹಲವು ಭಾಗಗಳಿಂದ ಕಾಮೆಂಟ್‌ಗಳು ಹರಿದು ಬರುತ್ತಿವೆ. “ಇದನ್ನು ನೋಡಿದ್ರೆ ಕಣ್ಣೀರೇ ಬರುತ್ತಿದೆ” ಎಂದು ಹಲವರು ಬರೆದಿದ್ದಾರೆ.
ಪ್ರಾಣಿಗಳಲ್ಲೂ ಒಂಟಿತನ ಸಾಧ್ಯವೇ?
ಪ್ರಾಣಿಗಳ ಲೋಕದಲ್ಲಿ ಕೂಡ ಎಲ್ಲೂ ಒಂದು ಕಡೆ ಮಮತೆಯ ಬದುಕು ಇರುತ್ತದೆ. ಪಂಚ್ ನ ಪ್ರಯತ್ನ ಹಾಗೂ ಮುಗ್ದತೆಯನ್ನು ಕಂಡು ಆ ಗುಂಪಿನಲ್ಲಿದ್ದ ಹೆಣ್ಣು ಮಂಗಗಳು ಮನಸ್ಸು ಕರಗಿತ್ತು ತಾಯಿಯ ಪ್ರೀತಿ ಕೇವಲ ಹೆತ್ತವರಿಂದ ಬರಬೇಕು ಎಂಬುದು ಏನು ಇಲ್ಲ. ಅದು ಯಾವ ರೂಪದಲ್ಲಿ ಕೂಡ ಬರಬಹುದು.
ಸಾಮಾನ್ಯವಾಗಿ ಕೋತಿಗಳು ಸಂಘಜೀವಿಗಳು. ಗುಂಪಿನಲ್ಲಿ ಬದುಕುವುದು ಅವುಗಳ ಸಹಜ ಸ್ವಭಾವ. ಆದರೆ ಕೆಲ ಸಂದರ್ಭಗಳಲ್ಲಿ ಗುಂಪಿನ ಒಳಗಿನ ಸಂಬಂಧಗಳು ಬದಲಾಗಬಹುದು. ವಿಶೇಷವಾಗಿ ತಾಯಿ ಇಲ್ಲದ ಮರಿಗಳು, ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ ಎಂದು ಪ್ರಾಣಿ ನಡವಳಿಕಾ ತಜ್ಞರು ಹೇಳುತ್ತಾರೆ.
ಪಂಚ್‌ನ ವರ್ತನೆ, ಅದಕ್ಕೆ ಭಾವನಾತ್ಮಕ ಆಸರೆ ಬೇಕು ಎಂಬುದನ್ನೇ ತೋರಿಸುತ್ತದೆ. ಮನುಷ್ಯ ಮಕ್ಕಳಂತೆ, ಪ್ರಾಣಿ ಮರಿಗಳಿಗೂ ಭದ್ರತೆಯ ಭಾವನೆ ಮುಖ್ಯ.
ಮನಸ್ಸು ಹಿಂಡುವ ದೃಶ್ಯ
ಪಂಚ್ ಗೊಂಬೆಯನ್ನ ತಬ್ಬಿಕೊಂಡು ಮೌನವಾಗಿ ಕೂತಿರುವ ದೃಶ್ಯ ನೋಡಿದರೆ, ಕಲ್ಲು ಹೃದಯದವರಿಗೂ ಕಣ್ಣಂಚಲ್ಲಿ ನೀರು ಬರಬಹುದು.
ತಾಯಿ ದೂರವಾದಾಗ, ಅದರ ಮಡಿಲಿನ ಉಷ್ಣತೆಯನ್ನು ಹುಡುಕುತ್ತಾ ಈ ಮರಿ ಗೊಂಬೆಯನ್ನೇ ಅಪ್ಪಿಕೊಂಡಿದೆ. “ಅಮ್ಮಾ” ಎಂದು ಹೇಳಲಾರದೆ ಇದ್ದರೂ, ಅದರ ವರ್ತನೆ ಆ ಕಿರುಕುಳವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಇಚಿಕಾವಾ ಸಿಟಿ ಜೂನಲ್ಲಿ ಈಗ ಪಂಚ್ ವಿಶೇಷ ಗಮನದ ಕೇಂದ್ರವಾಗಿದೆ. ಜೂ ಸಿಬ್ಬಂದಿ ಅದರ ಆರೈಕೆಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ ಎನ್ನಲಾಗಿದೆ.
ಈ ಘಟನೆಯಿಂದ ತಿಳಿಯುವ ಸಾರಾಂಶ
ಈ ಘಟನೆ ನಮಗೆ ಒಂದು ಪಾಠ ಹೇಳುತ್ತದೆ — ಭಾವನೆಗಳು ಮನುಷ್ಯರಿಗಷ್ಟೇ ಸೀಮಿತ ಅಲ್ಲ. ಪ್ರಾಣಿಗಳಿಗೂ ನೋವು, ಪ್ರೀತಿ, ಒಂಟಿತನ ಎಲ್ಲವೂ ಇವೆ.
ಪಂಚ್ ಕಥೆ ಕೇವಲ ಒಂದು ವೈರಲ್ ವಿಡಿಯೋ ಅಲ್ಲ. ಅದು ತಾಯಿ ಪ್ರೀತಿಯ ಮಹತ್ವ, ಒಂಟಿತನದ ನೋವು ಮತ್ತು ಭಾವನಾತ್ಮಕ ಆಸರೆಯ ಅಗತ್ಯತೆಯ ಬಗ್ಗೆ ನಮ್ಮನ್ನ ಯೋಚಿಸುವಂತೆ ಮಾಡುತ್ತದೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿರುವ ಪಂಚ್ ಮರಿ ಕೋತಿಯ ಈ ಕಥೆ, ಜಗತ್ತಿನ ಲಕ್ಷಾಂತರ ಜನರ ಮನಸ್ಸು ಮುಟ್ಟಿದೆ.
ಒಂದು ನಿರ್ಜೀವ ಗೊಂಬೆಯಲ್ಲೇ ಜೀವ ಕಂಡುಕೊಂಡ ಈ ಮರಿ, ತಾಯಿ ಪ್ರೀತಿಯ ಮೌಲ್ಯವನ್ನು ಮತ್ತೆ ನೆನಪಿಸಿದೆ.